ಹೊಸ ಹುಟ್ಟಿನ ಯುರೋಪಿಯನ್ ಸಾಹಿತ್ಯದಿಂದ ಪ್ರಭಾವಿತವಾದ 15 ಮತ್ತು 16ನೆಯ ಶತಮಾನದ ಇಂಗ್ಲೆಂಡಿನ ಎಲಿಜಬೆತ್ ಯುಗದಲ್ಲಿ, ಇಂಗ್ಲಿಷ್ ಅಭಿಜಾತ ಸಾಹಿತ್ಯ ಸೃಷ್ಟಿಗೆ ಹೇಗೆ ಮಾದರಿ, ಸ್ಫೂರ್ತಿ ಒದಗಿಸಿತೋ ಹಾಗೆಯೇ ಇಂಗ್ಲಿಷ್ ವಿಮರ್ಶಾ ಪರಂಪರೆಗೂ ಅದು ಪ್ರೇರಣೆ ನೀಡಿತು. ಜಾನ್ಸನ್ನನ ಕಾಲದವರೆಗೂ ಅಭಿಜಾತ ಸಾಹಿತ್ಯದ ಸೂತ್ರ, ಸಿದ್ಧಾಂತಗಳೇ ಇಂಗ್ಲಿಷ್ ವಿಮರ್ಶೆಯ ಮೇಲೆ ಮಹತ್ತರವಾದ ಪ್ರಭಾವ ಬೀರಿದವು. ಸಿಡ್ನಿ, ಸ್ಪೆನ್ಸರ್, ಜಾಪ್ಮನ್, ಮಾರ್ಲೊ ಮುಂತಾದ ಪ್ರತಿಭಾನ್ವಿತ ಕವಿಗಳು ಅಭಿಜಾತ ಸಾಹಿತ್ಯದಲ್ಲಿ ಗುರುತಿಸಿದ ಮುಖ್ಯ ಗುಣಗಳೆಂದರೆ ಅಲ್ಲಿನ ಸ್ವಾತಂತ್ರ್ಯ, ಸಮೃದ್ಧಿ ಹಾಗೂ ಭಾಷೆಯ ಔಚಿತ್ಯ. ಈ ಅಂಶಗಳನ್ನು ಅಂದಿನ ವಿಮರ್ಶಕರು ಮಾತ್ರ ಸರಿಯಾಗಿ ಗ್ರಹಿಸಲಿಲ್ಲ. ಎಲಿಜಬೆತ್ ಕಾಲದ ಮೊಟ್ಟಮೊದಲ ವಿಮರ್ಶಾಗ್ರಂಥಗಳೆಂದು ಹೇಳಬಹುದಾದ ಕೃತಿಗಳಲ್ಲಿ ಸಾಹಿತ್ಯ ಚಿಂತನೆಗಿಂತಲೂ ಮಿಗಿಲಾಗಿ, ಕಾವ್ಯವಸ್ತುವಿನ ಮೇಲೆ ಆಧಾರಿತವಾದ ವಿಂಗಡಣೆ, ವಿಭಜನೆ, ಛಂದಸ್ಸಿನ ಸ್ವರೂಪ-ಇವುಗಳನ್ನು ಕುರಿತ ಚರ್ಚೆಯ ಮಂಜು ದಟ್ಟವಾಗಿ ಹರಡಿದೆ. ಮಧ್ಯೆ ಆಗಾಗ ಅತ್ಯಂತ ಕಲ್ಪನಾಮಯವಾದ, ನವಿರಾದ ತಾತ್ತ್ವಿಕ ಚಿಂತನೆ, ವಿಚಾರ ಮಂಥನಗಳೂ ಕಾಣಸಿಗುತ್ತವೆ. ಇವೆಲ್ಲ ಅಭಿಜಾತ ಸಾಹಿತ್ಯದ ಪ್ರೇರಣೆಯಿಂದ ಹೊಮ್ಮಿದ ಅಂಶಗಳಾದರೂ ಪ್ಲೇಟೊ, ಅರಿಸ್ಟಾಟಲರಲ್ಲಿ ಕಾಣುವ ವಿಚಾರವೈಶಾಲ್ಯ, ಗಾಢಚಿಂತನೆಗಳು ಇಲ್ಲಿ ವಿರಳ. ಶಾಶ್ವತಕೀರ್ತಿ ದೊರಕಿಸಿಕೊಂಡ ಇಂಗ್ಲಿಷ್ ವಿಮರ್ಶಾಗ್ರಂಥವೆಂದರೆ-ಫಿಲಿಪ್ ಸಿಡ್ನಿಯ ಅಪಾಲಜಿ ಫಾರ್ ಪೊಯಟ್ರಿ (ಕಾವ್ಯಕ್ಕೊಂದು ಸಮರ್ಥನೆ). ವಿಚಾರದ ಸ್ವೋಪಜ್ಞತೆಗಿಂತ ಹೆಚ್ಚಾಗಿ ಈ ಗ್ರಂಥದಲ್ಲಿ, ಲೇಖಕನ ನವಿರಾದ ತಾತ್ತ್ವಿಕಚಿಂತನೆ, ಕಾವ್ಯವನ್ನು ಕುರಿತ ಉತ್ಕರ್ಷ, ಸುಸಂಸ್ಕೃತ ಅಭಿರುಚಿ, ತನ್ನ ಉತ್ಕೃಷ್ಟ ವ್ಯಕ್ತಿತ್ವಕ್ಕೆ ಅನುಗುಣವಾದ ಸರಳ ಮನೋಧರ್ಮ-ಇವುಗಳನ್ನೇ ಕಾಣುತ್ತೇವೆ. ಮಾರ್ಲೊ, ಷೇಕ್ಸ್ಪಿಯರ್ ಮೊದಲಾದವರ ಕೃತಿಗಳು ಅರಳುವುದಕ್ಕೆ ಮುಂಚೆ ಸಿಡ್ನಿ ತನ್ನ ಗ್ರಂಥ ಬರೆದವನಾದ್ದರಿಂದ ಅವನಿಗೆ ತನ್ನ ಕಾಲದ ಜನಪ್ರಿಯ ರಂಗಭೂಮಿಯ ಬಗ್ಗೆ ಅಷ್ಟೇನೂ ಗೌರವವಿರಲಿಲ್ಲ. ಪ್ಲೇಟೊ, ಅರಿಸ್ಟಾಟಲರ ನಡುವೆ ಉಂಟಾದ ಜಿಜ್ಞಾಸೆಯನ್ನೇ ಹೋಲುವ ವಿಚಾರ ಸಮುದಾಯ ಇಂಗ್ಲಿಷ್ ವಿಮರ್ಶೆಯಲ್ಲಿ ಮೊದಲು ಅಭಿವ್ಯಕ್ತಿ ಪಡೆದುದು ಸಿಡ್ನಿಯ ಗ್ರಂಥದಲ್ಲಿ. ಸಿಡ್ನಿ ಕಾವ್ಯದ ಬಗೆಗೆ ಮಾತನಾಡುತ್ತ ಚಿತ್ರ, ಇದರ ಗುರಿ ಉಪದೇಶ ಮತ್ತು ಆನಂದ ಎಂದ. ಕಾವ್ಯವು ಆನಂದವನ್ನು ಕೊಡುತ್ತದೆ. ಧಾರ್ಮಿಕ ಬದುಕಿಗೆ ಪ್ರಚೋದನೆಯನ್ನೂ ನೀಡುತ್ತದೆ. ತತ್ತ್ವಶಾಸ್ತ್ರ, ಅಮೂರ್ತ ಇತಿಹಾಸವು ನಿರ್ದಿಷ್ಟ ವ್ಯಕ್ತಿಗಳ ಸುತ್ತ ಹೆಣೆದುಕೊಳ್ಳುತ್ತದೆ. ಕವಿಯೂ ಮೂರ್ತ, ಅಮೂರ್ತಗಳನ್ನು ಒಂದುಗೂಡಿಸುತ್ತಾನೆ. ಸದ್ಗುಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿತ್ತಬಲ್ಲ ಕಾವ್ಯವು ಬೇರಿಲ್ಲ, ಶಾಸ್ತ್ರಗಳನ್ನು ಮೀರಿಸಿದ್ದು; ಇದು ಅವನ ಕಾವ್ಯ ಸಮರ್ಥನೆ. ಬೆನ್ ಜಾನ್ಸನ್ನನ ಡಿಸ್ಕವರೀಸ್ ಎಂಬ ಗ್ರಂಥದಲ್ಲಿ ಅವನ ಶಿಷ್ಟ ಅಭಿರುಚಿ, ಸಂಪ್ರದಾಯಶೀಲತೆಗಳನ್ನು ಕಾಣಬಹುದು. ಅಭಿಜಾತ ಸಾಹಿತ್ಯದಿಂದಲೇ ಎತ್ತಿಕೊಂಡಂತೆ ಕಾಣುವ, ಅವನ ಹಲವು ತಪ್ಪು ಒಪ್ಪ್ಪುಗಳಿಂದ ತುಂಬಿದ ಕಾವ್ಯಸೂತ್ರಗಳಿಗೆ ಅವನ ವೈದುಷ್ಯಪೂರ್ಣ ವ್ಯಕ್ತಿತ್ವವೇ ಅಚ್ಚುಕಟ್ಟಾದ ಸಮಗ್ರೀಕರಣ ನೀಡುತ್ತದೆ. ಅಭಿಜಾತಸಾಹಿತ್ಯಸೂತ್ರಗಳನ್ನು ಮೊಟ್ಟಮೊದಲು ತನ್ನ ಸೂತ್ರ ಹಾಗೂ ಪ್ರಯೋಗಗಳಲ್ಲಿ ಕಾರ್ಯಪ್ರವೃತ್ತಗೊಳಿಸಿದವ ಬೆನ್ಜಾನ್ಸನ್.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ